ಮಗೋಸಿಯನ್ -
	ಉತ್ತರ ಉಗಾಂಡದ ಪುಟ್ಟ ನೆಲೆಯೊಂದರ (ಮಗೋಸಿ) ಹೆಸರನ್ನಾಧರಿಸಿ ದಕ್ಷಿಣ ಆಫ್ರಿಕದಲ್ಲಿಯೂ ವ್ಯಾಪಕವಾಗಿ ಹರಡಿದ ಸೂಕ್ಷ್ಮ ಶಿಲಾಯುಗ ಸಂಸ್ಕøತಿಯ ವೈವಿಧ್ಯಗಳಲ್ಲೊಂದು. ಕಲ್ಲಿನ ಮೇಲೆ ಚಕ್ಕೆ ಎಬ್ಬಿಸಲು ಅನುಕೂಲವಾಗುವಂಥ ಪ್ರಹಾರ ಘಟ್ಟವನ್ನು ಸಿದ್ಧಪಡಿಸಿ ಆಯುಧ ತಯಾರಿಸುವ ಮಧ್ಯಶಿಲಾಯುಗದ ನಿರ್ಮಾಣ ತಂತ್ರದಿಂದ ಉತ್ತರ ಶಿಲಾಯುಗದ ಸೂಕ್ಷ್ಮ ಶಿಲಾಯುಧ ಸಂಸ್ಕøತಿಗೆ ಪದಾರ್ಪಣ ಮಾಡುವ ಸಂಕ್ರಮಣಕಾಲದ ಸಂಸ್ಕøತಿಯಿದು. ಇದನ್ನು ಮೊದಲು "ಮಾಡರ್ ಪೂರ್ಟ್ ಸಂಸ್ಕøತಿ" ಎಂದು ಕರೆದು ಅನತಿ ಕಾಲದಲ್ಲೇ ಆ ಹೆಸರನ್ನು ಕೈಬಿಟ್ಟು "ಮಗೋಸಿಯನ್" ಎಂದು ಕರೆಯಲಾಯಿತು. ಪೂರ್ವ ಆರೆಂಜ್ ಫ್ರೀಸ್ಟೇಟ್ ಹಾಗೂ ಬಸುಟೊಲ್ಯಾಂಡ್‍ಗಳ ಬೆಟ್ಟಗಾಡು ಪ್ರದೇಶದಲ್ಲಿ, ಉತ್ತರ ಟ್ರಾನ್ಸ್‍ವಾಲ್ ಹಾಗೂ ಸೌತ್-ವೆಸ್ಟ್ ಆಫ್ರಿಕದ ಉತ್ತರಭಾಗಗಳಲ್ಲಿ ಈ ಸಂಸ್ಕøತಿಯ ನೆಲೆಗಳು ವಿಪುಲವಾಗಿ ಗೋಚರಿಸಿವೆ. ಉತ್ತರ ಕೇಪ್ ಹಾಗೂ ನೇಟಲ್ ಪ್ರದೇಶದಲ್ಲಿಯೂ ಈ ಸಂಸ್ಕøತಿ ಹರಡಿತ್ತೆಂದು ತಿಳಿದುಬರುತ್ತದೆ. ಈ ಸಂಸ್ಕøತಿಯಲ್ಲಿ ಸ್ಥಳೀಯ ವೈವಿಧ್ಯ ಕಂಡುಬಂದಿದ್ದು ಕೇಪ್ ಕರಾವಳಿ ತೀರದ ಒಂದು ಬಗೆಯನ್ನು "ಹೌವೀಸನ್ಸ್ ಪೂರ್ಟ್ ವೇರಿಯಂಟ್" ಎಂದು ಕರೆಯಲಾಗಿದೆ. ಫಿಶ್‍ಹುಕ್ ಎಂಬಲ್ಲಿಯ ಅನೇಕ ಗವಿಗಳಲ್ಲಿ ಈ ವೈವಿಧ್ಯ ಗೋಚರಿಸಿದೆ. ಲೇಡಿಬ್ರಾಂಡ್ ಎಂಬಲ್ಲಿಯ ರೋಸ್‍ಕಾಟೇಜ್ ಗವಿಯಲ್ಲಿ ಮಗೋಸಿಯನ್ ಸಂಸ್ಕøತಿಯ ಮೂರು ಮಜಲುಗಳನ್ನು ಗುರುತಿಸಲಾಗಿದೆ.

	ಈ ಕಾಲದ ಮಾನವ ನಿರ್ಮಿತ ಶಿಲಾಯುಧಗಳು ಗಾತ್ರದಲ್ಲಿ ಚಿಕ್ಕವು. ಸೂಕ್ಷ್ಮಶಿಲಾ ಅಲಗುಗಳು, ಬೆನ್ನುಳ್ಳ ಅಲಗುಗಳು, ವಿವಿಧ ಬಗೆಯ ಹರೆಯುವ ಸಾಧನಗಳು. ಲ್ಯೂನೇಟುಗಳು (ಚಂದ್ರಾಕೃತಿಯ ಆಯುಧ) ಮುಂತಾದವು ಈ ಕಾಲದ ಮುಖ್ಯ ಉಪಕರಣಗಳು. ಮಧ್ಯಶಿಲಾಯುಗ ಹಾಗೂ ಉತ್ತರ ಶಿಲಾಯುಗದ (ಟೈಪೊಲಾಜಿಕಲ್) ಸಂಬಂಧವನ್ನು ನಡುವಣ ತಂತ್ರ, ವೈe್ಞÁನಿಕ ಹಾಗೂ ಪ್ರಾರೂಪಿಕ (ಟೈಪೊಲಾಜಿಕಲ್) ಸಂಬಂಧವನ್ನು ಈ ಆಯುಧಗಳಿಂದ ಸ್ಪಷ್ಟವಾಗಿ ತಿಳಿಯಬಹುದು. ಮಗೋಸಿಯಲ್ಲಿ ತ್ರಿಕೋಣಾಕೃತಿಯ, ಎಲೆಯಾಕಾರದ ಹಾಗೂ ವಜ್ರಾಕೃತಿಯ ಚಿಕ್ಕಮೊನೆಗಳು ಲಭ್ಯವಾಗಿವೆ.

	ಮಗೋಸಿಯನ್ ಮತ್ತು ಉತ್ತರ ಶಿಲಾಯುಗಗಳ ನಡುವಣ ಕಾಲದ ಸಂಸ್ಕøತಿಯ ಸ್ಥಿತ್ಯಂತರದ ಮಜಲುಗಳನ್ನು ಮಗೋಸಿ-ಡೋನಿಯನ್ ಎಂದು ಗುರುತಿಸಲಾಗಿದೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ